ಜನ್ಮಾಂತರ ಸಿದ್ಧಾಂತ

ಕರ್ಮಸಿದ್ಧಾಂತದೊಂದಿಗೆ ಅದರ ಮತ್ತೊಂದು ಮುಖದಂಥ ಈ ಸಿದ್ಧಾಂತ ಹಿಂದೂಮತದಲ್ಲಿ ಕಂಡುಬರುತ್ತದೆ. ಇದನ್ನು ಪುನರ್ಜನ್ಮ ಸಿದ್ಧಾಂತವೆಂದೂ ಕರೆವುದಿದೆ. ದೇಹ ನಾಶವಾದಾಗ ಆತ್ಮ ನಾಶವಾಗದೆ ಪುನಃ ಜನ್ಮವನ್ನು ಪಡೆಯುತ್ತದೆ ಎಂದು ಈ ಸಿದ್ಧಾಂತ ತಿಳಿಸುತ್ತದೆ. ಅದು ಯಾವ ರೀತಿಯ ಜನ್ಮವನ್ನು ಪಡೆಯುತ್ತದೆ ಎಂಬುದನ್ನು ಅದರ ಪೂರ್ವಾರ್ಜಿತ ಕರ್ಮ ನಿರ್ಧರಿಸುತ್ತದೆ. ಆತ್ಮ ತನ್ನ ಕರ್ಮಫಲವನ್ನು ಅನುಭವಿಸಿಯೇ ತೀರಬೇಕು. ಆದ್ದರಿಂದ ಅದರ ಕರ್ಮಕ್ಷಯವಾಗುವವರೆಗೂ ಅದು ಪುನರ್ಜನ್ಮ ಪಡೆಯುತ್ತಲೇ ಇರಬೇಕು. ಭಗವದ್ಗೀತೆಯಲ್ಲಿ ಜಾತಸ್ಯ ಹಿ ಧ್ರುವೋ ಮೃತ್ಯುಃ-ಎಂಬ ಶ್ಲೋಕದಲ್ಲಿ ಹುಟ್ಟಿದವನಿಗೆ ಸಾವು ತಪ್ಪದು, ಸತ್ತವನಿಗೆ ಪುನರ್ಜನ್ಮ ತಪ್ಪದು ಎಂದು ಬೋಧಿಸಲಾಗಿದೆ. ವಾಸಾಂಸಿ ಜೀರ್ಣಾನಿ ಯಥಾ ವಿಹಾಯ-ಎಂಬ ಶ್ಲೋಕದಲ್ಲಿಯೂ ದೇಹಿನೋಸ್ಮಿನ್ ಯಥಾ ದೇಹವನ್ನು ತಾಳವುದನ್ನು, ಒಂದೇ ಶರೀರದಲ್ಲಿ ಬಾಲ್ಯ-ಯೌವನ-ಮುಪ್ಪು ಎಂಬ ಅವಸ್ಥೆಗಳು ಪ್ರಾಪ್ತವಾಗುವಂತೆ ಬೇರೆ ದೇಹವೂ ಮರಣಾನಂತರ ಪ್ರಾಪ್ತವಾಗುವುದನ್ನು ಅರ್ಜುನನಿಗೆ ಕೃಷ್ಣ ಬೋಧಿಸುತ್ತಾನೆ. ಮುಂಡಕೋಪನಿಷತ್ತಿನಲ್ಲಿ, ಶ್ವೇತಾತ್ವತರೋಪನಿಷತ್ತಿನಲ್ಲಿ, ಬೃಹದಾರಣ್ಯಕದಲ್ಲಿ, ಆತ್ಮ ತನ್ನ ಕರ್ಮವಾಸನೆಯಿಂದ (ಸ್ವರ್ಗಲೋಕದಲ್ಲಿ ಪುಣ್ಯ ಕರ್ಮದ ಫಲವನ್ನು ಅನುಭವಿಸಿದ ಅನಂತರ) ಪುನರ್ಜನ್ಮವನ್ನು ಹೊಂದುತ್ತದೆ ಎಂದು ತಿಳಿಸಲಾಗಿದೆ. ಆತ್ಮಜ್ಞಾನವೆಂಬ ಅಗ್ನಿಯಿಂದ ಕರ್ಮವನ್ನು ಸುಟ್ಟು ಮುಕ್ತಿಯನ್ನು ಪಡೆದರೆ ಮಾತ್ರ ಪುನರ್ಜನ್ಮದಿಂದ ತಪ್ಪಿಸಿಕೊಳ್ಳುವುದು ಸಾಧ್ಯ ಎಂದೂ ಮರಣಕಾಲದಲ್ಲಿ ಜೀವಿಗೆ ಯಾವ ಕಾಮನೆಯೂ ಇಲ್ಲದೆ ಆತ್ಮನಲ್ಲಿಯೇ ನೆಲಸಿದ್ದರೆ, ಅವನು ಸಂಸಾರಕ್ಕೆ ಸಿಕ್ಕದೆ ಬ್ರಹ್ಮವನ್ನು ಸೇರುತ್ತಾನೆಂದೂ ಧರ್ಮ ಗ್ರಂಥಗಳು ಬೋಧಿಸಿವೆ. ಹೀಗೆ ಜನ್ಮಾಂತರ ದೆಶೆ ಕರ್ಮವನ್ನವಲಂಬಿಸಿದೆ. ಹಾಗೆಯೇ ಭಿನ್ನ ಭಿನ್ನ ಜೀವಿಗಳ ಭಿನ್ನ ಭಿನ್ನ ಅವಸ್ಥೆಗಳೂ ಅವರ ಕರ್ಮಗಳ ತಾರತಮ್ಯವನ್ನು ಅವಲಂಬಿಸಿವೆ-ಎಂದು ಕರ್ಮಸಿದ್ಧಾಂತ ಹೇಳಿದೆ. ಸಂಸಾರ ಚಕ್ರದಿಂದ ಬಿಡುಗಡೆಯಾಗುವುದಕ್ಕೆ (ಕರ್ಮಗಳನ್ನು ಮಾಡಲೇಬೇಕಾಗಿದ್ದರೂ) ಕರ್ಮ ಫಲದಲ್ಲಿ ಆಸಕ್ತಿಯನ್ನು ತ್ಯಜಿಸುವುದೇ ಅಂದರೆ ಅನಾಸಕ್ತನಾಗುವುದೇ ಸರಿಯಾದ ಮಾರ್ಗ. ಈ ನಿಷ್ಕಾಮಕರ್ಮಯೋಗವನ್ನು ಭಗವದ್ಗೀತೆಯಲ್ಲಿ ವಿಶದಪಡಿಸಲಾಗಿದೆ. ಆಸೆಯನ್ನು ಬಿಟ್ಟವನೇ ಸಂಸಾರಚಕ್ರದಿಂದ ಬಿಡುಗಡೆ ಹೊಂದುವನು ಎಂದು ಮಹಾವೀರನೂ ಬುದ್ಧನೂ ಉಪದೇಶಿಸಿದರು. ಕರ್ಮ ಅನಾದಿ. ಜೀವನೂ ಅನಾದಿ ಎಂದು ಹೇಳುವ ಹಿಂದೂಧರ್ಮ ಜೀವನಿಗೆ ಹುಟ್ಟುಸಾವುಗಳನ್ನು ತಪ್ಪಿಸಿಕೊಳ್ಳುವ ಮೋಕ್ಷಮಾರ್ಗವಿದೆ ಎಂದು ಆಶಾದಾಯಕವಾಗಿ ಸಿದ್ಧಾಂತಪಡಿಸುತ್ತದೆ. 

ಇಸ್ಲಾಂ ಮತ್ತು ಕ್ರೈಸ್ತಮತಗಳು ಜೀವನಿಗೆ ಒಂದೇ ಜನ್ಮ, ಅದರಲ್ಲಿ ಗಳಿಸಿದ ಪುಣ್ಯಪಾಪಗಳಿಂದ ನಿರಂತರವಾಗಿ ನಾಕನರಕಗಳನ್ನು ಸೇರಿ ಅಲ್ಲಿಯೇ ಇರುವನೆಂದು ಹೇಳುತ್ತವೆ. ಮಾನವ ಒಂದೇ ಜನ್ಮದಲ್ಲಿ ಪರಿಪೂರ್ಣತೆಯನ್ನು ಸಾಧಿಸಲಾಗುವುದಿಲ್ಲ ಎಂದೂ ಅವನ ಸಾಧನೆ ಅನೇಕ ಜನ್ಮಗಳಲ್ಲಿ ಮುಂದುವರಿಯುತ್ತದೆ ಎಂದೂ ಹಿಂದೂ ಧರ್ಮ ವಾದಿಸುತ್ತದೆ; ಅದಲ್ಲದೆ ಮಾನವಜನ್ಮ ಬರುವುದಕ್ಕೆ ಮುಂಚೆ ಎಷ್ಟೋ ಇತರ ಜನ್ಮಗಳಲ್ಲಿ ಪುಣ್ಯವನ್ನು ಗಳಿಸಿರಬೇಕು ಎಂದು ನಂಬುತ್ತದೆ. 									(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ